ಶ್ರೀ ಗುರು ಪರಂಪರೆ

  1. ಶ್ರೀ ರುದ್ರಮುನಿ ಶಿವಯೋಗಿಗಳು:

ಉತ್ತರ ಭಾರತದ ಕಾಶೀ ಕ್ಷೇತ್ರದಲ್ಲಿಯ ಜಂಗಮವಾಡಿ ಮಠದಿಂದ ಶ್ರೀ ರುದ್ರಮುನಿ ಶಿವಯೋಗಿಗಳು ಧರ್ಮ ಪ್ರಚಾರಾರ್ಥವಾಗಿ ದಕ್ಷಿಣಕ್ಕೆ ದಯಮಾಡಿಸಿ ರಾಮೇಶ್ವರ ತಲುಪಿ ಕರ್ನಾಟಕ ಹಂಪೆಗೆ ಬಂದು ಉದ್ದಾನ ವೀರಭದ್ರೇಶ್ವರ ಗುಡಿ ಹತ್ತಿರದ ಪರ್ಣ ಕುಟೀರದಲ್ಲಿ ಕೆಲ ದಿವಸ ತಪಸ್ಸುಗೈದು, ಕಮಲಾಪುರ (ಕಮಲಾಪುರದಲ್ಲಿದ್ದ ಗವಿಮಠವನ್ನು ಪ್ರೌಢ ದೇವರಾಯನ ಕಾಲದಲ್ಲಿ ಜೀರ್ಣೊದ್ಧಾರ ಮಾಡಿಸಲಾಗಿದೆ) ಮಾರ್ಗವಾಗಿ ಬಂದು ಕೊಪ್ಪಳ ಗುಡ್ಡದ ಗವಿಯಲ್ಲಿ ನೆಲೆ ನಿಂತು ಬೆಟ್ಟದ ಗವಿಯೇ ಗವಿಮಠವಾಯಿತು. ಶ್ರೀ ರುದ್ರಮುನಿ ಶಿವಯೋಗಿಗಳಿಂದ ಕೊಪ್ಪಳ ಶ್ರೀ ಗವಿಮಠದ ಭವ್ಯ ಪರಂಪರೆ ಪ್ರಾರಂಭಗೊಂಡಿದೆ. ಇವರ ತಪಸ್ಸಿನ ಪ್ರಭಾವವು ನಾಡಿನಲ್ಲಿ ಹರಡಲು ಮಸ್ಕಿಯ ಶರಣ ಹೋಳಿ ಹಂಪಯ್ಯನು ವ್ಯಾಪಾರಮಾಡುತ್ತ ಶ್ರೀ ರುದ್ರಮುನಿ ಶಿವಯೋಗಿಗಳ ದರ್ಶನ, ಪಾದೋದಕ ಪ್ರಸಾದಗಳನ್ನು ಪಡೆದು ಪುನೀತನಾಗಿ ವ್ಯಾಪಾರದಲ್ಲಿ ಲಾಭ ಹೊಂದಲು ಗುಹೆ ಮುಂದಿನ ಭಾಗವನ್ನು ಕಟ್ಟಿಸಿದನು. ಸಮೀಪದ ಹಿರೇಹಳ್ಳದ ದಂಡೆಯ ಮೇಲಿರುವ ನರೇಗಲ್ಲ ಗ್ರಾಮಕ್ಕೆ ಮೇಲಿಂದ ಮೇಲೆ ಶ್ರೀಗಳವರು ದಯಮಾಡಿಸುತ್ತಲಿದ್ದರು. ಒಂದೊಂದು ಸಲ ಹಿರೇಹಳ್ಳದ ದಂಡೆಯ ನಿಸರ್ಗ ರಮಣೀಯ ನೆಲೆಯಲ್ಲಿ ಕುಳಿತು ಲಿಂಗಾನಂದದಲ್ಲಿ ಮೈಮರೆಯುತ್ತಿದ್ದರು. ನರೇಗಲ್ಲಿನಲ್ಲಿಯೇ ಲಿಂಗದೊಳಗಾದರು. ಮೂಲಕರ್ತೃ ಗದ್ದುಗೆ ನರೇಗಲ್ಲಿನಲ್ಲಿದ್ದು ಪೂಜೆಗೊಳ್ಳುತ್ತಿದೆಯಲ್ಲದೆ, ಪ್ರತಿವರ್ಷ ಜಾತ್ರೆಯೂ ಜರುಗುತ್ತದೆ.

  1. ಶ್ರೀ ಸಂಗನಬಸವ ಶಿವಯೋಗಿಗಳು:

ಶ್ರೀ ಗವಿಮಠ ಪರಂಪರೆಯ ಎರಡನೆಯ ಪೀಠಾಧಿಪತಿಗಳಾದವರು, ಇದೇ ನರೇಗಲ್ಲ ಹಿರೇಮಠದ ಶ್ರೀ ಸಂಗನಬಸವ ಚರಮೂರ್ತಿಗಳವರು. ಇವರು ಬಳ್ಳಾರಿ ಜಿಲ್ಲೆಯಲ್ಲಿ ಸಂಚರಿಸುತ್ತ ಈಗ ದಾವಣಗೇರಿ ಜಿಲ್ಲೆಯ ಹರಪ್ಪನಹಳ್ಳಿಗೆ ದಯಮಾಡಿಸಿದರು. ಅಲ್ಲಿಯ ಗುರುಸಿದ್ಧಶೆಟ್ಟಿ, ಓಂಕಾರಶೆಟ್ಟಿ ಮುಂತಾದ ಭಕ್ತರ ಸೇವೆಗೆ ಒಲಿದು ಗವಿಮಠದ ಶಾಖಾಮಠವೊಂದನ್ನು ಕಟ್ಟಿಸಿದರು. ಜ.ಸಂಗನಬಸವ ಶಿವಯೋಗಿಗಳವರು ಹರಪ್ಪನಹಳ್ಳಿಯಲ್ಲಿಯೇ ಲಿಂಗೈಕ್ಯರಾಗಲು ಅಲ್ಲಿಯ ಹೂವಿನ ಹಡಗಲಿ ರಸ್ತೆಯಲ್ಲಿರುವ ಗವಿಮಠದಲ್ಲಿ ಸಮಾಧಿ ಮಾಡಲಾಯಿತು. ಇಂದಿಗೂ ಅವರ ಗದ್ದುಗೆ ಹರಪ್ಪನಹಳ್ಳಿಯಲ್ಲಿ ಪೂಜೆಗೊಳ್ಳುತ್ತಲಿದೆ.

  1. . ಶಿವಲಿಂಗ ಶಿವಯೋಗಿಗಳು:

ಇವರು ಹರಪ್ಪನಹಳ್ಳಿಯ ಚರಮೂರ್ತಿಗಳವರು. ಜ.ಸಂಗನಬಸವ ಶಿವಯೋಗಿಗಳವರು ಹರಪ್ಪನಹಳ್ಳಿಗೆ ಬಂದಾಗ ವಿದ್ಯೆಯಲ್ಲಿ ಷಣ್ಮಖ, ಭಕ್ತಿಯಲ್ಲಿ ಬಸವರಸ ಹಾಗೂ ಶಿವಯೋಗ ಸಿದ್ಧಿಯಲ್ಲಿ ಅಲ್ಲಮಪ್ರಭುವೇ ಆಗಿದ್ದ ಶಿವಲಿಂಗ ಚರಮೂರ್ತಿಗಳನ್ನು ತಮ್ಮ ಮುಂದಿನ ಪೀಠಾಧಿಪತಿಗಳೆಂದು ಆಯ್ಕೆ ಮಾಡಿಕೊಂಡು ಪಟ್ಟಾಧಿಕಾರ ನೀಡಿದರು. ಇವರು ಗವಿಮಠದೊಡೆಯರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಲಿದ್ದರು. ಒಮ್ಮೆ ಸಮೀಪದ ಹಳ್ಳಿಯ ಮುಗ್ದ ಕೊಪ್ಪಳ ಶ್ರೀ ಗವಿಮಠಕ್ಕೆ ಮಕ್ಕಳನ್ನು ಬಯಸಿ ಬಂದರು ಆ ಹೆಣ್ಣು ಮಗಳು ನೀರು ತುಂಬಲು ಹೋಗಿ, ಮಠದ ನೀರಿನ ಡೋಣಿಯಲ್ಲಿ ಬಿದ್ದು ಪ್ರಾಣ ನೀಗಿದಳು ಈ ವಿಷಯವನ್ನರಿತ ಶ್ರೀಗಳವರು, ‘ಮಗನನ್ನು ಪಡೆಯಲು, ಬಯಸಿ ಬಂದು ಈ ಪವಿತ್ರಸ್ಥಾನದಲ್ಲಿ ದೇಹ ಬಿಡುವುದನುಚಿತವು ಮೇಲೇಳೆಂದು’ ಆಶೀರ್ವದಿಸಿ, ಪ್ರಾಣ ದಾನಗೈದು ಸಂತಾನ ಕರುಣಿಸಿದರು. ಇವರ ಗದ್ದುಗೆಯು ಕೂಡ ಹರಪ್ಪನಹಳ್ಳಿಯ ಗವಿಮಠದಲ್ಲಾಗಿದೆ. ತಮ್ಮ ಗುರುಗಳ ಗದ್ದುಗೆಯೊಂದಿಗೆ ಇಂದಿಗೂ ಪೂಜೆಗೊಳ್ಳುತ್ತಲಿದೆ.

  1. . ಚೆನ್ನವೀರ ಶಿವಯೋಗಿಗಳು:

ಇವರ ಗುರುಗಳಾದ ಜ. ಶಿವಲಿಂಗ ಶಿವಯೋಗಿಗಳವರು ಗದಗ ಜಿಲ್ಲೆಯ ಶಾಂತಗಿರಿಗೆ ದಯಮಾಡಿಸಿದಾಗ ಅಲ್ಲಿಯ ಹಿರೇಮಠದ ಹಿರೇಮಠದ ವಿರುಪಾಕ್ಷಯ್ಯನವರ ಮಕ್ಕಳಾದ ಶ್ರೀ ಚನ್ನವೀರ ಸ್ವಾಮಿಗಳವರನ್ನು ತಮ್ಮ ಮರಿಯನ್ನಾಗಿ ಸ್ವೀಕರಸಿ, ಪಟ್ಟಾಭಿಷೇಕವನ್ನು ನೆರವೇರಿಸಿದರು. ಇವರು ಶರಣರಧರ್ಮದ ಪರಮಸಾರವಾದ ದಾಸೋಹವನ್ನು ಎಡೆಬಿಡದೆ ನಡೆಸಿದರು. ನಾಡನ್ನು ಸಂಚರಿಸುತ್ತ ಕಾಶಿಗೆ ದಯಾಮಾಡಿಸಿ, ವಿದ್ವತ್ ಸಭೆಯಲ್ಲಿ ಶಿವಾದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ ವಿಜಯಿಗಳಾದವರು. ಒಂದು ದಿನ ಇವರು ಪ್ರಯಾಗದಲ್ಲಿ ಲಿಂಗಪೂಜೆಗೆ ಕುಳಿತಿರುವಾಗ, ಜಂಗಮನೊಬ್ಬ ತನಗೆ ದೊರೆತ ಅನಾಥ ಜಂಗಮ ಶಿಶುವೊಂದನ್ನು ಇವರಿಗೆ ಅರ್ಪಿಸಿದನು. ಆ ಜಂಗಮ ಶಿಶುವೇ ಕಾಶೀಕರಿಬಸವ ಸ್ವಾಮಿಗಳವರೆಂದು ಪ್ರಸಿದ್ದರಾದ 5ನೆಯ ಪೀಠಾಧಿಪತಿಗಳು. ಚೆನ್ನವೀರಮಹಾಸ್ವಾಮಿಗಳವರು ಬಾಚಿಕೊಂಡನ ಹಳ್ಳಿಗೆ ದಯಮಾಡಿಸಿದಾಗ ಅಲ್ಲಿಯೇ ಶಿವಪೂಜಾ ಲೋಲರಾಗಿ ಇದ್ದು ಬಿಡುತ್ತಿದ್ದರು. ಹಾಗೆ ಒಂದು ಸಲ ಬಂದಾಗ ಬಾಚಿಕೊಂಡನ ಹಳ್ಳಿಯಲ್ಲಿಯೇ ಲಿಂಗೈಕ್ಯರಾಗಲು ಅಲ್ಲಯೇ ಇವರ ಗದ್ದುಗೆಯನ್ನು ಮಾಡಲಾಗಿದೆ. ಆ ಗದ್ದುಗೆ ಈಗಲೂ ಪೂಜೆಗೊಳ್ಳತ್ತಲಿದೆ.

  1. . ಕಾಶೀ ಕರಿಬಸವ ಶಿವಯೋಗಿಗಳವರು:

ಜ. ಕಾಶೀ ಕರಿಬಸವ ಮಹಾಸ್ವಾಮಿಗಳವರು ಶ್ರೀ ಗವಿಮಠದ ಐದನೆಯ ಪೀಠಾಧಿಪತಿಗಳಾದರು. ಇವರು ಗುರುಗಳಾದ ಜ. ಚೆನ್ನವೀರ ಮಹಾಸ್ವಾಮಿಗಳವರಿಗೆ ಕಾಶಿಯಲ್ಲಿ ದೊರೆತ್ತಿದ್ದರಿಂದ ಕಾಶೀ ಕರಿಬಸವಸ್ವಾಮಿಗಳೆಂದು ಖ್ಯಾತರಾಗಿದ್ದಾರೆ. ಶ್ರೀ ಗವಿಮಠದ ದಾಸೋಹ ಮತ್ತು ಕನ್ನಡ ಹಾಗೂ ಸಂಸ್ಕೃತ ಪಾಠಶಾಲೆಗಳನ್ನು ಊರ್ಜಿತವಾಗೊಳಿಸಿದರು. ಒಮ್ಮೆ ಶ್ರೀಮಠದಲ್ಲಿ ಭಕ್ತಿನೋರ್ವನು ಪ್ರಸಾದ ಪಂಕ್ತಿಯಲ್ಲಿ ಕುಳಿತು ರೋಗಪೀಡಿತ ಕೈಗಳಿಂದ ಪ್ರಸಾದ ಸ್ವೀಕರಿಸಲು ಬಾರದೆ ಹಾಗೇ ಕುಳಿತಿರುವಾಗ ಇದನ್ನರಿತ ಶ್ರೀಗಳವರು ಕರುಣಾ ದೃಷ್ಟಿಯಿಂದ ಅವನಲ್ಲಿಗೆ ತೆರಳಿ ಆಯುರ್ವೇದ ಚಿಕಿತ್ಸೆ ನೀಡಲು ಕೈಗಳು ಮೇಲಕ್ಕೆತ್ತಲು ಬಂದವು. ಇವರು ಕನಾಟಕದ ಉದ್ದಗಲಕ್ಕೂ ಸಂಚರಿಸುತ್ತ ಕೊಟ್ಟೂರು, ಮೈಸೂರು, ನಂಜುನಗೂಡು, ಡಂಬಳ ಹಾಗೂ ನವಿಲುಗುಂದಗಳನ್ನು ಸಂದರ್ಶಿದರು. ಗದಗಿನಲ್ಲಿದ್ದ ಭಕ್ತರ ಬಲವಾದ ಬಿನ್ನಹದ ಮೇರೆಗೆ ಅಲ್ಲಿಗೆ ತೆರಳಿ ಕೆಲವು ಕಾಲ ತಂಗಿರಲು ಅಲ್ಲಿಯೇ ಲಿಂಗದೊಳಗೆ ಬೆರೆದರು. ಅವರ ಗದ್ದುಗೆಯು ಗದುಗಿನ ಈಗಿನ ಜಗದ್ಗುರು ತೋಂಟದಾರ್ಯ ಮಠದಲ್ಲಿ ಮೂಲ ಕರ್ತೃ ಗದ್ದುಗೆಯಂತೆ ಪೂಜೆಗೊಳ್ಳತ್ತಲಿರುವುದನ್ನು ಗಮನಿಸಬಹುದಾಗಿದೆ.

  1. . ಶಿವಲಿಂಗ ಶಿವಯೋಗಿಗಳು:

ಐದನೆಯ ಪೀಠಾಧಿಪತಿಗಳಾದ ಜ. ಕಾಶೀಕರಿಬಸವ ಸ್ವಾಮಿಗಳವರಿಂದ ಅನುಗ್ರಹ ಪಡೆದರು. ಬೂದಿಹಾಳದ ಹಿರೇಮಠದ ಜ.ಶಿವಲಿಂಗ ಮಹಾಸ್ವಾಮಿಗಳವರು. ಇವರು ಸುಜ್ಞಾನಿಗಳು ವೈರಾಗ್ಯಶಾಲಿಗಳಾಗಿದ್ದರು. ಅನ್ನದಾನ ಜ್ಞಾನದಾನ ಮತ್ತು ಸದ್ಧರ್ಮದಾನಗಳನ್ನು ಅನವರತ ನಡೆಸುವವರಾಗಿದ್ದರು. ಇವರು ಕೊಪ್ಪಳ ಶ್ರೀ ಗವಿಮಠದ ಜವಾಬ್ದಾರಿಯನ್ನು ತಮ್ಮ ಉತ್ತರಾಧಿಕಾರಿಗಳಾದ ಪುಟ್ಟ ಸುಚೆನ್ನವೀರ ಮಹಾಸ್ವಾಮಿಗಳವರಿಗೆ ಒಪ್ಪಿಸಿ, ಹಿರೇವಡ್ಡಟ್ಟಿ, ಡಂಬಳ ಮೊದಲಾದ ಭಕ್ತರ ಕೋರಿಕೆಯ ಮೇರೆಗೆ ದಯಾಮಾಡಿಸಿ, ಸುಪ್ರಸಿದ್ದ ಕಪೋತಗಿರಿ (ಕಪ್ಪತಗುಡ್ಡ)ಗೆ ತೆರಳಿ ಆ ನಿಸರ್ಗ ರಮಣೀಯ ಸ್ಥಳದಲ್ಲಿ ತಪಸ್ಸನ್ನಾಚರಿಸಿದರು. ಆ ಸ್ಥಳವು ಇವರನ್ನು ಬಹುವಾಗಿ ಆಕರ್ಷಿಸಲು, ಅಲ್ಲಿಯೇ ನೆಲೆಸಿದರು. ಅಲ್ಲಿಯೇ ಸಮಾಧಿಯನ್ನು ಹೊಂದಿದರು. ಇವರ ಸಮಾಧಿಯು ನಂದಿವೇರಿ ಮಠದಲ್ಲಿ ಶೋಭಿಸುತ್ತ ಪೂಜೆಗೊಳ್ಳತ್ತಲಿದೆ.

  1. . ಪುಟ್ಟ ಸುಚೆನ್ನವೀರ ಶಿವಯೋಗಿಗಳು:

ಇವರು ಮಂಗಳೂರಿನ ಅರಳೆಲೆ ಮಠದ ಸಿದ್ದಯ್ಯನವರ ಮಕ್ಕಳು. ಇವರ ಗುರುಗಳಾದ ಜ. ಶಿವಲಿಂಗ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಿ ಪೀಠಾಧಿಪತಿಗಳಾದರು. ಭಕ್ತರ ಉಪಯೋಗಕ್ಕಾಗಿ ದನಕರುಗಳಿಗಾಗಿ ಶ್ರೀ ಮಠಕ್ಕೆ ಹೊಂದಿ ಕೆರೆಯನ್ನು ಕಟ್ಟಿಸಿದರು. ಗವಿಮಠ ಕೆರೆಗೆ ಹೊಂದಿಕೊಂಡಿರುವ ಕಲ್ಲುಬಂಡೆಯ ಮೇಲೆ ‘ಮಹಾಂತ ದೇವರು ಮಾಡಿಸಿದ ತೂಬು’ ಎಂಬ ಒಂದು ಸಾಲಿನ ಶಾಸನವಿದೆ. ಶ್ರೀ ಗವಿಮಠದಲ್ಲಿದ್ದ ಮರಿದೇವರಾದ ಮಹಾಂತ ದೇವರೆಂಬುವರು ಈ ಕೆರೆಯ ತೂಬನ್ನು ನಿಂತು ಕಟ್ಟಿಸಿರಬೇಕು. ಶ್ರೀಗಳವರು ಮಠಕ್ಕೆ ಮಹಾದ್ವಾರವನ್ನು, ಬೆಟ್ಟದ ಮೇಲೇರಲು ಪಾವಟಿಗಳನ್ನು ಮಾಡಿಸಿ ಶ್ರೀ ಮಠವನ್ನು ಅಂದಗೊಳಿಸಿದರು. ಗವಿಮಠದಲ್ಲಿದ್ದ ಶ್ರೀ ಚೆನ್ನಮಲ್ಲಿಕಾರ್ಜುನ ಮರಿದೇವರಿಗೆ ಪಟ್ಟಾಭಿಷೇಕ ಮಾಡಿಸಿ ಲಿಂಗೈಕ್ಯರಾದರು. ಇವರ ಸಮಾಧಿಯು ಕೊಪ್ಪಳ ಗವಿಮಠದಲ್ಲಾಗಿದೆ.

  1. . ಚೆನ್ನಮಲ್ಲಿಕಾರ್ಜುನ ಶಿವಯೋಗಿಗಳು:

ಇವರು ಮೂಲತಃ ಕೊಪ್ಪಳದವರಾಗಿದ್ದು, ಜ. ಪುಟ್ಟ ಸುಚೆನ್ನವೀರ ಶಿವಯೋಗಿಗಳಿಂದ ಉತ್ತರಾಧಿಕಾರ ಪಡೆದರು. ಇವರು ಭಕ್ತರ ಬಯಕೆಯಂತೆ ಬಳ್ಳಾರಿ ಜಿಲ್ಲೆಯ ದೇವಗೊಂಡನ ಹಳ್ಳಿಗೆ ದಯಮಾಡಿಸಿ, ಅಲ್ಲಿಯೇ ಕೆಲವು ದಿವಸ ವಾಸವಾಗಿರುವಾಗ ಲಿಂಗೈಕ್ಯರಾಗಲು ದೇವಗೊಂಡನ ಹಳ್ಳಿಯ ಗವಿಮಠದಲ್ಲಿ ಇವರ ಗದ್ದುಗೆಯಿದ್ದು ಪೂಜೆಗೊಳ್ಳುತ್ತಿದೆ.

  1. . ಸಂಗನಬಸವ ಶಿವಯೋಗಿಗಳು:

ಇವರು ಬಳ್ಳಾರಿ ಜಿಲ್ಲೆಯ ಬುಕ್ಕಸಾಗರದ ಹಿರೇಮಠದವರು. ಇವರು ಗವಿಮಠದ ಕೆರೆಯನ್ನು ವಿಸ್ತರಿಸಿದರು. ಕೆರೆಯ ದುರಸ್ತಿಯಲ್ಲಿ ತೊಡಗಿದ್ದ ಕಬ್ಬಿಣದ ಮಲ್ಲಪ್ಪನೆಂಬ ಭಕ್ತನ ಮುಖಕ್ಕೆ ದೊಡ್ಡ ಕಲ್ಲೊಂದು ಸಿಡಿದು ಬಡಿಯಿತು. ದವಡೆಯು ಸೊಟ್ಟಾಯಿತು. ಶ್ರೀಗಳವರ ಅನುಕಂಪದಿಂದ ಚಿಕಿತ್ಸೆ ಮಾಡಿದರು, ಸೊಟ್ಟಾದ ದವಡೆಯು ಸರಿಯಾಯಿತು. ಇವರನ್ನು ಹೂವಿನ ಹಡಗಲಿಯ ಭಕ್ತರು ವಿಜೃಂಭಣೆಯಿಂದ ಬರಮಾಡಿಕೊಂಡರು. ಹೊಸ ಕಲ್ಲು ಮಠವನ್ನು ಕಟ್ಟಿಸಿದರಲ್ಲದೆ, ಶ್ರೀ ಮಠಕ್ಕೆ ಭೂದಾನ ಮಾಡಿದರು. ಮಕರಬ್ಬಿ, ಕತ್ತೆ ಬೆನ್ನೂರು, ಮಾಗಳ, ಹಗರಿ ಮೊದಲಾದ ಗ್ರಾಮಗಳಲ್ಲಿದ್ದ ಮಠಗಳನ್ನು ಜೀರ್ಣೋದ್ಧಾರಗೊಳಿಸಿದವರು. ಕಾಮಲಾಪುರದಲ್ಲಿ ಶ್ರೀ ಮಠಕ್ಕೆ ಗುರುಲಿಂಗ ಚರವರರನ್ನು ಸ್ವಾಮಿಗಳಾಗಿ ನೇಮಿಸಿದರು. ಕೊಪ್ಪಳಕ್ಕೆ ಹತ್ತಿರದ ಬಹಾದ್ದೂರ ಬಂಡಿಯಲ್ಲಿ ಕಟ್ಟಿಸಿದ ಹೊಸಮಠದ ಅಧಿಕಾರವನ್ನು ಸಿದ್ಧಲಿಂಗ ಮಹಾಸ್ವಾಮಿಗಳವರಿಗೆ ವಹಿಸಿಕೊಟ್ಟರು. ಮಕರಬ್ಬಿಯ ಶಾಖಾಮಠದಲ್ಲಿ ಇವರ ಗದ್ದುಗೆಯಿದ್ದು, ಇಂದಿಗೂ ಪೂಜೆಗೊಳ್ಳತ್ತಲಿದೆ.

  1. . ಚೆನ್ನಬಸವ ಶಿವಯೋಗಿಗಳು:

ಇವರು ಮೂಲತಃ ಕೊಪ್ಪಳದವರು. ಜಗದ್ಗುರು ಗವಿಸಿದ್ಧೇಶ್ವರ ಶಿವಯೋಗಿಯ ಗುರುಗಳು, ಮಹಿಮಾ ಶಾಲಿಯಾದ ಗವಿಸಿದ್ಧೇಶ್ವರರ ಲೀಲೆಗಳನ್ನು ಕಂಡು ಹರ್ಷಿಸಿದರು. ಮಠಕ್ಕೆ ಯೋಗ್ಯ ಅಧಿಪತಿಯು ದೊರಕಿದನೆಂದು ಆನಂದಗೊಂಡರು. ಇವರ ಕಾಲಕ್ಕೆ ಕೊಪ್ಪಳ ಶ್ರೀ ಗವಿಮಠ ಹಾಗೂ ಗದುಗಿನ ಜಗದ್ಗುರು ತೋಂಟದಾರ್ಯಮಠಗಳ ನಡುವೆ ಅನ್ಯೊನ್ಯ ಸಂಬಂಧವಿತ್ತೆಂದು ತಿಳಿದು ಬರುತ್ತದೆ. ಶ್ರೀ ಗವಿಮಠದ ಮರಿದೇವರಾದ ಸದಾಶಿವ ಮಹಾಸ್ವಾಮಿಗಳವರು. ಗದ್ದುಗೆ ಕೊಪ್ಪಳ ಗವಿಮಠದಲ್ಲಿದ್ದು ತೋಂಟದ ಸ್ವಾಮಿ ಗದ್ದುಗೆಯೆಂದು ನಿತ್ಯ ಪೂಜೆಗೊಳ್ಳುತ್ತಿದೆ.

ಗದಗದಲ್ಲಿ ನಡೆದಿದ್ದ ತೋಂಟದಪ್ಪಗಳವರ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗಿಗೆ ಅಡ್ಡಿಯುಂಟಾಗಲು ಗವಿಸಿದ್ಧೇಶ್ವರರು ಗದುಗಿಗೆ ದಯಮಾಡಿಸಿ ಮೆರವಣಿಗೆಯನ್ನು ಸಾಂಗವಾಗಿಸಿದರು. ಈ ಘಟನೆಯನ್ನು ವಿವರಿಸುವ ಮಂಗಳಾರತಿ ಪದ್ಯ ಗದಗ, ಕೊಪ್ಪಳ ಭಾಗದಲ್ಲಿ ಪ್ರಚಲಿತದಲ್ಲಿದೆ.

ಮಂಗಲೆನ್ನೆ ಕುರುಂಗ ನಯನೆ | ತುಂಗ ಗುರು ಗವಿಸಿದ್ಧಗೆ |

ಮೀರಾಲಂ ಬಹಾದ್ದೂರಗಾಗಿಹ | ಕ್ರೂರ ರೋಗವ ತೊಲಗಿಸಿ

ಮೀರಿದಾ ಜಹಾಗೀರು ಪಡೆದ | ಧೀರ ಗಂಭೀರಗೆ

ಮೆರೆವ ತೋಂಟದ | ಪರಮ ಯೋಗಿಯ

ಮೆರವಣಿಗೆ ನಿಲ್ಲಲು | ಸ್ಮರಿಸಿದಾಕ್ಷಣ

ವರ ಉತ್ಸವವ | ಮೆರೆಸಿದನುಪಮ ಶೀಲಗೆ|

ಈ ಸಂತೋಷದಲ್ಲಿ ಜಗದ್ಗುರು ಸದಾಶಿವ ಮಹಾಶಿವಯೋಗಿಗಳವವರು ಕೊಪ್ಪಳಕ್ಕೆ ಆಗಮಿಸಿ ತಮ್ಮ ಉತ್ಸವವನ್ನು ನೆರವೇರಿಸಿ ಕೊಟ್ಟ ಗವಿಸಿದ್ಧೇಶ್ವರರ ಲೀಲೆಗಳನ್ನು ಕೊಂಡಾಡಿದರು. ಇದಕ್ಕೆ ಗವಿಸಿದ್ಧೇಶ್ವರರು ನಗುನಗುತ್ತ ‘ಇದೆಲ್ಲವೂ ನಮ್ಮುಭಯರಿಗೆ ಕರ್ತನಾದ ಚೆನ್ನಬಸವಸ್ವಾಮಿ ಗುರುಕೃಪೆ’ ಎಂದು ತಿಳಿಸಿದರು. ಹೀಗೇಯೆ ತೋಂಟದ ಜಗದ್ಗುರುಗಳವರು ತಮ್ಮ ಮಾತೃಮಠಕ್ಕೆ ಬರುತ್ತ ಹೋಗುತಲಿದ್ದು ಕೊಪ್ಪಳದಲ್ಲಿಯೇ ಲಿಂಗೈಕ್ಯರಾಗಲು ಶ್ರೀ ಗವಿಮಠದಲ್ಲಿಯೇ ಅವರ ಗದ್ದುಗೆಯಿದೆ. ಅದು ನಿತ್ಯ ಪೂಜೆಗೊಳ್ಳುತ್ತಲಿದೆ. ಹತ್ತನೆಯ ಪೀಠಾಧಿಪತಿಗಳಾದ ಜ. ಚೆನ್ನಬಸವ ಶಿವಯೋಗಿಗಳವರು ಮಹಿಮಾ ಪುರುಷರು. ಇವರು ರಾಯಚೂರು ಭಾಗದಲ್ಲಿ ಸಂಚರಿಸುತ್ತ ಮರಿಚೇಡನ್ನು ಸಮೀಪಿಸಿದಾಗ, ಹುರುಳಿ ನಾಗಪ್ಪನೆಂಬ ಬಡರೈತನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಂತ ಭಕ್ತಿಯಿಂದ ಸೇವೆ ಮಾಡಿದನು. ಅವನ ಭಕ್ತಿ ಸೇವೆಗೆ ಶ್ರೀಗಳವರು ಬಗೆದುಂಬಿ ಆಶೀರ್ವದಿಸಿದರು. ಶ್ರೀಗಳವರ ಕೃಪೆಗೆ ಪಾತ್ರನಾಗಿ ಹುರಳಿ ನಾಗಪ್ಪನು ಪೋತನಾಳ, ಮರಿಚೇಡು, ಮಣ್ಣೂರು, ಬಹಾದ್ದೂರಬಂಡಿ, ಬೇಟಗೇರಿ ಹಾಗೂ ಮಂಡಲಗಿರಿ ಗ್ರಾಮಗಳನ್ನು ಜಹಾಗೀರು ಪಡೆದು ‘ನಾಗನಾಥ ನಾಡಗೌಡ ರಾಜ ಬಹಾದ್ದೂರ’ನೆಂಬ ಬಿರಿದು ಹೊಂದಿ ಆಡಳಿತ ನಡೆಸಿದನು. ಇದೆಲ್ಲವೂ ಗವಿಮಠದಪ್ಪಗಳಾದ ಜ.ಚೆನ್ನಬಸವ ಶಿವಯೋಗಿಗಳ ಕೃಪೆಯೆಂದು, ಶ್ರೀ ಗವಿಮಠದ ಮುಖ ಮಂಟಪವನ್ನು ಕಟ್ಟಿಸಿದನು. ಇದಲ್ಲದೇ, ಹಿರೇಸಿಂದೋಗಿಯಲ್ಲಿಯ ಗವಿಮಠ ಹಾಗೂ ಉಗ್ರಾಣಗಳನ್ನು ಹೊಸದಾಗಿ ಕಟ್ಟಿಸಿದನು. ಮಕ್ಕಳಿಲ್ಲದ ಆನೆಗೊಂದಿಯ ದೊರೆಗೆ ಪುತ್ರಸಂತಾನವಾಗಲು ಶ್ರೀಮಠಕ್ಕೆ ಸಂಗಮೇಶ್ವರದಲ್ಲಿದ್ದ ಹೊಲಗದ್ದೆಗಳನ್ನು ದಾನವಾಗಿ ನೀಡಿದರು.

  1. . ಗವಿಸಿದ್ಧೇಶ್ವರ ಲೀಲೆಗಳು:

ಈ ಮೊದಲು ಬಂದಿದ್ದು ಶ್ರೀ ಗವಿಸಿದ್ಧೇಶ್ವರರಾನಂತರದವರ ಚರಿತ್ರೆಯನ್ನು ಮುಂದೆ ಹೇಳಿದೆ.

  1. . ಹಿರಿಯ ಶಾಂತವೀರ ಶಿವಯೋಗಿಗಳು:

ಜ. ಗವಿಸಿದ್ದೇಶ್ವರರು ಕೊಟ್ಟೂರಿಗೆ ದಯಮಾಡಿಸಿದಾಗ, ಊರ ಹೊರವಲಯದ ಬನ್ನಿಗಿಡದ ಬುಡದಲ್ಲಿ ಮಲಗಿದ್ದ ಈ ಜಂಗಮ ಬಾಲಕನ ಮೇಲೆ ನಾಗರಹವೊಂದು ಹೆಡೆ ಬಿಚ್ಚಿಕೊಂಡು ಆಡುತ್ತಿದ್ದುದ್ದನ್ನು ಕಂಡರು. ಈ ಕುವರನನ್ನು ತಮಗೊಪ್ಪಿಸಬೇಕೆಂದು ತಂದೆ ತಾಯಿಗಳಿಗೆ ತಿಳಿಸಿ ಮಗುವನ್ನು ಕರೆದು ತಂದು ಜೋಪಾನ ಮಾಡಿದರು ಗವಿಸಿದ್ಧೇಶ್ವರರ ಕೃಪೆಗೆ ಪಾತ್ರರಾದ ಜ. ಹಿರಿಯ ಶಾಂತವೀರ ಶಿವಯೋಗಿಗಳು ಚರಿತ್ರೆಯು ಅಗಾಧವಾದುದು. ಅಂತೆಯೇ ಆ ಕಾಲದ ಮಹಾ ಮಹಿಮಾ ಪುರುಷರಿಂದಸ್ತುತಿಸಲ್ಪಟ್ಟಿದ್ದಾರೆ. ಮೈಲಾರದ ಶ್ರೀ ಬಸವಲಿಂಗ ಶರಣರು ಇವರನ್ನು ಶಿವಾನುಭವ ದರ್ಪಣದಲ್ಲಿ:

ಗವಿಶಾಂತವೀರ ನಿಜದನು/ ಭವದ ಸಾರ|

ಭುವನದೊಳಿಹ ಶಿವಶರಣ ಗಣಂಗಳ|

ತವಕದೊಳವಿರತ ಪೊರೆವ ಸುಧೀರ|

ಮುನ್ನಿನಾದಿನಾಥ ನಂಬಿದ | ರನ್ನು ಪೊರೆವ ದಾತ|

ಅನ್ಯವನರಿಯದೆ| ತನ್ನ ಭಜಿಸುತಿಹ|

ಚೆನ್ನವೀರ ಮದ್ ಗುರು ಗುರುವರನೀತ

ಎಂದು ನೆನದಿದ್ದಾರೆ. ‘ಚೆನ್ನವೀರ ಮದ್ ಗುರು ಗುರುವರನೀತ’ ನೆಂದು ಭಕ್ತಿ ಭಾವದಿಂದ ನೆನೆದಿರುವುದರಿಂದ ಮೈಲಾರದ ಬಸವಲಿಂಗ ಶರಣರ ಗುರುಗಳಾದ ಲಿಂಗನಾಯಕನಹಳ್ಳಿ ಶ್ರೀ ಚೆನ್ನವೀರ ಶಿವಯೋಗಿಗಳವರ ಗುರುಗಳಿವರೆಂದು ತಿಳಿದು ಬರುತ್ತದೆ. ಇವರ ಸಮಕಾಲೀನವರಾದ ಮುಳುಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳವರು ಲಿಂಗನಾಯಕನಹಳ್ಳಿ ವಿರಕ್ತಮಠದ ಶ್ರೀ ಶಿವಯೋಗಿ ಚೆನ್ನವೀರ ಸ್ವಾಮಿಗಳವರನ್ನು ಆಶ್ರಯಿಸಿ, ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಸುದಾಗಿ ತಿಳಿಯುತ್ತದೆ. ಮುಂದೆ ಸಂಚಾರಕ್ಕೆ ಹೊರಟು ಕಪೋತಗಿರಿಯಲ್ಲಿ ಕಡೆಯ ಕೊಳ್ಳದಲ್ಲಿದ್ದ ತಪಸ್ವಿಗಳಾದ ಶಾಂತವೀರ( ಹಿರಿಯ) ಸ್ವಾಮಿಗಳವರ ದರ್ಶನ ತೆಗೆದುಕೊಂಡು, ಅವರಿಂದ ಜ್ಞಾನೋಪದೇಶ ಹೊಂದಿದರು ಎಂದು ಪ್ರೊ. ಶಿ.ಶಿ ಬಸವನಾಳರು ಉಲ್ಲೇಖಿಸಿದ್ದಾರೆ. ಕಪೋತಗಿರಿಯ ಕಡೆಕೊಳ್ಳದಲ್ಲಿದ್ದ ಆ ತಪಸ್ವಿಗಳೇ ಶ್ರೀ ಗವಿಮಠದ ಜ. ಹಿರಿಯ ಶಾಂತವೀರ ಶಿವಯೋಗಿಗಳವವರು ಎಂದು ತಿಳಿಯಲು ಕೈವಲ್ಯ ದರ್ಪಣದಲ್ಲಿ ಇವರನ್ನು ಕುರಿತ ಪದ್ಯಗಳು ಆಧಾರವಾಗಿವೆ. ಅಲ್ಲದೆ ಮೈಲಾರದ ಶ್ರೀ ಬಸವಲಿಂಗ ಶರಣರು ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು, ಲಿಂಗನಾಯಕನಹಳ್ಳಿ ಶ್ರೀ ಚೆನ್ನವೀರ ಶಿವಯೋಗಿಗಳವರ ಶಿಷ್ಯರಾಗಿದ್ದು, ತಮ್ಮ ಗುರುವಿನ ಗುರುವಾದ ಹಿರಿಯ ಶಾಂತವೀರ ಸ್ವಾಮಿಗಳವರನ್ನು ‘ಚೆನ್ನವೀರ ಮದ್‌ಗುರು ಗುರುವನೀತ’ ಎಂದು ಭಕ್ತಿ ಗೌರವಗಳಿಂದ ತಮ್ಮ ಕೃತಿಗಳಲ್ಲಿ ಸ್ತುತಿಸಿರುವುದು ಸಹಜವಾಗಿದೆ. ಕಪೋತಗಿರಿ ಶ್ರೀ ಗವಿಮಠದ ಶಾಖಾಮಠವಾದ ನಂದಿವೇರಿಮಠವು ಇದ್ದು ಅಲ್ಲಿಯೇ ಆ ಪರಂಪರೆಯ 6ನೆಯ ಪೀಠಾಧಿಪತಿಗಳಾದ ಜ. ಶಿವಲಿಂಗ ಶಿವಯೋಗಿಗಳವರ ಗದ್ದುಗೆ ಇರುವುದು. 12ನೆಯವರಾದ ಇವರ ಗದ್ದುಗೆಯು ಕೂಡ ಕಪೋತ ಗಿರಿಯ ನಂದಿವೇರಿ ಮಠದಲ್ಲಿದೆ.

ಧನ್ಯನಾದೆನು ಶಂತವೀರ ಸ್ವಾಮಿ

ನಿನ್ನ ಪಾದಾರವಿಂದವ ಕಂಡುದ್ಧಾರ ||ಪಲ್ಲವಿ||

ಚಿದ್ಗವಿಯೊಳಗಿರುವಂಥ | ನಿತ್ಯ|

ಮದ್ಗುರು ಚರರೂಪದಿ ಚರಿಪಂತ

ಸದ್ಗುಣಗಣನುಳ್ಳ ಶಾಂತ | ಕರ |

ಗದ್ಗಿಯೊಳಗೆ ಮಹಾಂತ ಲಿಂಗಾಗಿ ನಿಂತ

ಒಡೆಯ ಶಾಂತವೀರ ನಿಮಗೆ |

ಬಿಡದೆ ಕರ್ಮ ಸತ್ಕಾರ್ಯಗಳ |

ಹಿಡಿಯದೆಗ್ಗು ಮಾಡುತಿರುವೆ ತಡೆಯಲೇತಕೆ |

ಕೂಸಿನುಪಚಾರಗಳ ತಾಯಿ | ಹೇಸಿಕೊಳದೆ ಮಾಡುವಂತೆ

ಈಶ ಶಾಂತವೀರ ನಿಮಗೆ ಹೇಯವಿಲ್ಲವು

ನಾಶರಹಿತ ಭೇದವನು ಲೇಸು ಮಾತ್ರ ಉಳಿಯಲಿಲ್ಲ

ಈಸು ಪರಿಯ ಶೌಚ ಕ್ರಿಯೆಗಳೆಲ್ಲ ಮಾಡಿದೆ

ಹುಡುಗನಿದಕೆ ಮಾಡಬಹುದೆ | ಒಡೆಯತನಕೆ ಭಂಗವೆಂಬ

ಒಡಕ ಬುದ್ದಿ ನಿಮಗೆ ಸ್ವಪ್ನದೊಳಗೆತೊರೆದು |

ಮೃಡನ ರೂಪ ಶಾಂತವೀರ | ಕಡೆಯ ಮಹಾಂತ ಲಿಂಗ ಶಿಶು

ನಡೆಯ ಕಲೆಯ ತಿಳಿದ ನಿಮಗೆ ಪಡಿಯ ಕಾಣೆನು

ತೂಗುವ ಬನ್ನಿರೆ ಮಹಾಗುರು ಶಾಂತೀಶ್ವರನ

ರಾಗದ ಪುತ್ರ ಮಹಾಂತನ ||ಪಲ್ಲ||

ತಾನೆ ಪರಶಿವ ಮಹಾಜ್ಞಾನಿ ನಿರಂಜನ ಶೂನ್ಯ

ಸಿಂಹಾಸನದ ಕರ್ತನು |

ಶೂನ್ಯ ಸಿಂಹಾನದ ಕರ್ತನು

ಶಿವಯೋಗದ ಧ್ಯಾನ ಸಮಾಧಿಯ ವಿರಕ್ತನು

ನಾದಾತ್ಮಕ ಶರಣು ಪಾದರೇಣುವ ತಮ್ಮ

ಮೋದದಿಂ ತೆಗೆದಾಕೃತಿ ಮಾಡಿ |

ವೇದದಿಂ ತೆಗೆದಾಕೃತಿ ಮಾಡಿ | ಶಿವ ಕಳೆಯಿಟ್ಟ

ಅನಾದಿ ಶಿಶು ಮಹಾಂತ ಲಿಂಗನು

  1. . ಶಿವಶಾಂತವೀರ ಶಿವಯೋಗಿಗಳು:

ಇವರು ಕೊಪ್ಪಳ ತಾಲೂಕಿನ ಬಿಸರಳ್ಳಿಯ ಬೃಹನ್ಮಠ (ಹಿರಿಯಮಠ) ಶಿವಬಸವಾರ್ಯಶಾಸ್ತ್ರಿಗಳ ಜೇಷ್ಠ ಪುತ್ರರು. ಜ. ಹಿರಿಯ ಶಾಂತವೀರ ಮಹಾಸ್ವಾಮಿಗಳವರ ಕೃಪೆಗೆ ಪಾತ್ರರಾಗಿ 13ನೆಯ ಪೀಠಾಧಿಪತಿಳಾದರು. ಇವರು ‘ಹುಚ್ಚಪ್ಪ ಸ್ವಾಮಿ’ ಯೆಂದು ಪ್ರಸಿದ್ಧಿರಾಗಿದ್ದರು; ಈ ಉಚ್ಚತರದ ಮಹಾತ್ಮರು. ಮಕ್ಕಳನ್ನು ಬೇಡಿ ದಂಪತಿಗಳು ಬಂದಾಗ ಬಂಜೆಯ ಮೊಲೆಯುಂಡು ಹಾಲು ತರಿಸಿ ಬಂಜೆತನ ನೀಗಿದ ಅಸಮಾನ್ಯ ಶಿವಯೋಗಿಗಳು. ಕೊಪ್ಪಳ ತಾಲೂಕಿನ ಕವಲೂರಿನ ಕಟಗಿಹಳ್ಳಿಮಠದ ಕೊಟ್ಟೂರಯ್ಯನವರು ಮಕ್ಕಳಿಲ್ಲದೆ ಪುತ್ರಾರ್ಥಿಗಳಾಗಿ ಬಂದು ಸೇವೆಗೈಯಲು ತೀರ್ಥಪ್ರಸಾದಗಳನ್ನಿತ್ತು ಆಶೀರ್ವದಿಸಿದರು. ಗುರುಬಸಯ್ಯನೆಂಬ ಮಗನು ಜನಿಸಿದನು. ಇಂದಿಗೂ ಗುರುಬಸಯ್ಯನವರ ಪುಣ್ಯ ತಿಥಿಯನ್ನು ಕವಲೂರಿನಲ್ಲಿ ಆಚರಿಸುತ್ತಿದ್ದು, ಶ್ರೀ ಗವಿಮಠದ ಚರವರರು ಹೋಗಿ ಕಾಣಿಕೆಗಳನ್ನು ಪಡೆಯುವವರು. ಗುರುಬಸಯ್ಯನವರು ಉದ್ಧರಣ ಸಾಹಿತ್ಯ ರಚಿಸಿದ್ದಾರೆ. ವೀರಶೈವ ಸಾಹಿತ್ಯದಲ್ಲಿ ಇದೊಂದು ಸ್ವಾಮಿಗಳ ಅಪರೂಪದ ಸಾಹಿತ್ಯ ಪ್ರಕಾರ. ಗುರುಬಸವ ಸ್ವಾಮಿಗಳು ಶಿಷ್ಯರೊಡನೆ ಹುಲಗಿ(ಮುನಿರಾಬಾದ) ಗ್ರಾಮಕ್ಕೆ ಆಗಮಿಸಿ, ತುಂಗಭದ್ರನದಿಗೆ ದಯಮಾಡಿಸಿದಾಗ ಜಡಿಮಳೆಯು ಸುರಿಯ ಹತ್ತಿತ್ತು. ಹುಲಿಗೆಮ್ಮದೇವಿಯ ಗುಡಿಯಲ್ಲಿಯೇ ತಂಗಿದರು. ಸರಿ ರಾತ್ರಿಯಾಯಿತು. ಮಳೆ ಬಿಡಲಿಲ್ಲ. ಲಿಂಗಪೂಜೆಯಿಲ್ಲ; ಲಿಂಗಾರ್ಪಿತವಿಲ್ಲ! ಭಕ್ತರೆಲ್ಲ ಚಿಂತಾತುರರಾದರು. ಹುಲಿಗೆಮ್ಮದೇವಿಯೇ ಶಿವಯೋಗಿಗಳ ಸೇವೆಗೆ ತೊಡಗಿದಳು. ದೇವಿಯು ಮಲಗಿದ ಪೂಜಾರಿಯ ಕನಸ್ಸಿನಲ್ಲಿ ಬಂದು ‘ಶಿವಯೋಗಿ ವರ್ಯರ ಪೂಜೆ ಪ್ರಸಾದಗಳಿಗಾಗಿ ಅಣಿಗೊಳಿಸು, ಏಳು, ಎದ್ದೇಳು, ನನ್ನ ಮಂದಿರಕ್ಕೆ ನಡೆ, ಎಂದು ಆಜ್ಞಾಪಿಸಿದಳು. ಎಚ್ಚರಗೊಂಡ ಪೂಜಾರಿಯು ಸಕಲ ಸಾಮಗ್ರಿಗಳೊಂದಿಗೆ ಆಗಮಿಸಿ ಎಲ್ಲವನ್ನು ಅಣಿಗೊಳಿಸಿ ಭಕ್ತರಿಷ್ಟಾರ್ಥದಂತೆ ದೇವಿಯು ತನ್ನ ವದನದಿಂದ ಲಿಂಗಾರ್ಪಿತಮಾಡಲು ಬಿನ್ನವಿಸಿಕೊಂಡಳು. ಗುರುಬಸವಯ್ಯಗಳವರ ಸಾಮರ್ಥ್ಯವನ್ನು ಕಂಡು ಭಕ್ತರು ಬೆರಗಾದರು. ಇವರ ಗುರುಗಳವರ ಗದ್ದುಗೆಯು ಕೊಪ್ಪಳ ಗವಿಮಠದಲ್ಲಾಗಿದೆ.

  1. . ಮರಿಶಾಂತವೀರ ಶಿವಯೋಗಿಗಳು:

ಜ. ಶಿವಶಾಂತವೀರ ಮಹಾಸ್ವಾಮಿಗಳವರ ನಂತರ ಕೊಪ್ಪಳ ಶ್ರೀ ಗವಿಮಠದ ಪೀಠಾಧಿಪತಿಗಳಾದವರು ಕೊಪ್ಪಳ ತಾಲೂಕಿನ ಮಾದಿನೂರು ಬೃಹನ್ಮಠದ ಗುರುಬಸವಯ್ಯನವರ ಮಕ್ಕಳು. ಜ. ಮರಿಶಾಂತವೀರ ಮಹಾಸ್ವಾಮಿಗಳವರೆಂಬ ಅಭಿದಾನದಿಂದ ಅಧಿಕಾರಕ್ಕೆ ಬಂದರು. ಇವರು ಪರಂಪರೆಯ ಶಿವಯೋಗಿಗಳಂತೆ ಭಕ್ತರುದ್ದಾರ ಮಾಡುತ್ತ ನಡೆದಿರುವುದನ್ನು ಕಾಣುತ್ತೇವೆ. ಇವರ ಗದ್ದುಗೆಯು ಕೊಪ್ಪಳ ಗವಿಮಠದಲ್ಲಾಗಿದೆ.

  1. . ಶಿವಶಾಂತವೀರ ಮಹಾಸ್ವಾಮಿಗಳವರು(ಗಡ್ಡದಜ್ಜಾ ಅವರು):

ಇವರು 14ನೆಯ ಪೀಠಾಧಿಪತಿಗಳಾಗಿದ್ದ ಜ. ಮರಿಶಾಂತವೀರ ಮಹಾಸ್ವಾಮಿಗಳವರು ತಾಮ್ರಗುಂಡಿಗೆ ದಯಮಾಡಿಸಿದಾಗ ‘ಅನ್ನದಾನಿ’ ಎಂಬ ಮಗುವನ್ನು ತಮ್ಮ ಹಿಂದೆ ಕರೆದುಕೊಂಡು ಬಂದರು ಅನ್ನದಾನಿಯೇ ಜ. ಶಿವಶಾಂತವೀರ ಮಹಾಸ್ವಾಮಿಗಳವರು ಎಂಬ ಅಭಿದಾನದಿಂದ 15ನೆಯ ಪೀಠಾಧಿಪತಿಳಾದರು. ಇವರ ಭಾವಚಿತ್ರವನ್ನು ಗವಿಮಠದಲ್ಲಿ ನೋಡಬಹುದು. ಇವರು ಗಡ್ಡದಜ್ಜಾ ಅವರೆಂದು ಪ್ರಸಿದ್ದರಾಗಿದ್ದಾರೆ. 1909ನೆಯ ಡಿಸೆಂಬರ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ವೀರಶೈವ ಮಹಾಸಭೆಯು 5ನೆಯ ಮಹಾ ಅಧಿವೇಶನವು ಸೋಲ್ಲಾಪುರದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಅಧಿವೇಶನದಲ್ಲಿ ಗಡ್ಡದಜ್ಜಾ ಅವರು ಪುಸ್ತಕ ವ್ಯಾಪಾರಿಯೊಬ್ಬನೊಡನೆ ಸಂಸ್ಕೃತದಲ್ಲಿ ಮಾತನಾಡುತ್ತಿದ್ದ ಸೂಡಿಯ ಜುಕ್ತಿ ಹಿರೇಮಠದ ಗುರುನಂಜಯ್ಯನೆಂಬ ವಿದ್ಯಾರ್ಥಿಯನ್ನು ತಮ್ಮ ಮುಂದಿನ ಪೀಠಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಗುರು ನಂಜಯ್ಯನವರು ಕಾಶಿಯಲ್ಲಿ 9ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಡುತ್ತಿರುವಾಗಲೇ ಇವರೇ ಮುಂದಿನ ಪೀಠಾಧಿಪತಿಯೆಂಬ ಮೃತ್ಯುಪತ್ರ ಮಾಡಿಸಿ ಕಡ್ಲಬಾಳ ಮಠದಲ್ಲಿ ಲಿಂಗೈಕ್ಯರಾದರು. ಆ ಕಾಲದ ಅಂದರೆ 1922ರ ಅಂದಾಜಿಗೆ ಅವರ ಭೌತಿಕ ಕಾಯವನ್ನು ಕಡ್ಲಬಾಳದಿಂದ ಕೊಪ್ಪಳದ ಭಕ್ತರು ವಿಶೇಷವಾಗಿ ಮುದ್ಗಲ್ಲ ಸಂಗಪ್ಪ ಮುಂತಾದವರು. ತಂದು ಕೊಪ್ಪಳ ಕೊಪ್ಪಳ ಮಠದಲ್ಲಿ ಗದ್ದುಗೆ ಮಾಡಿಸಿದರು.

ಗಡ್ಡದಜ್ಜಾ ಅವರು ವಿದ್ಯಾ ಪ್ರೇಮಿಗಳು, ಒಕ್ಕಲುತನ ಪ್ರೇಮಿಗಳಾಗಿದ್ದರು. ಅಂತೆಯೇ ಕೊಪ್ಪಳ ಶ್ರೀ ಗವಿಮಠದಲ್ಲಿ ಆ ಕಾಲದ ಸಂಸ್ಕೃತದಲ್ಲಿ ಘನವಿದ್ವಾಂಸರಾದ ಪಂ. ಕೊಂಗವಾಡ ವೀರಭದ್ರಶಾಸ್ತ್ರಿಗಳು ಹಿರೇಮಠ ಇವರನ್ನು ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರನ್ನಾಗಿರಿಸಿದ್ದರು. ಇವರ ಕೈಯಲ್ಲಿ ಬಳ್ಳಾರಿ ಹತ್ತಿರದ ಯೇಳುಬೆಂಚಿ (ವೈ) ನಾಗೇಶ ಶಾಸ್ತ್ರಿಗಳವರು ಓದಿ, ಹುಬ್ಬಳ್ಳಿಯಲ್ಲಿ ಜರುಗಿದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾದ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿಲಿಟ್ ಪಡೆದರು. ಮೈಸೂರು ಹಾಗೂ ಸೊಂಡೂರು ಮಹಾರಾಜರಿಂದ ಆಸ್ಥಾನ ವಿದ್ವಾನ್‌ರೆಂದು ಗೌರವಿಸಲ್ಪಟ್ಟಿದ್ದರು. ಕಾಳಿದಾಸನ ಕೃತಿಗಳನ್ನು, ಭಗವದ್ಗೀತೆಯನ್ನು ಕನ್ನಡಕ್ಕೆ ತಂದಿದ್ದಾರೆ. ಹಲವಾರು ಪುರಾಣಗಳನ್ನು ರಚಿಸಿದ್ದಾರೆ. ಕೊನೆಯಲ್ಲಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಪುರಾಣ ರಚಿಸಿ ಮಾತೃ ಸಂಸ್ಥೆಯ ಋಣವನ್ನು ತೀರಿಸಿದ್ದಾರೆ. ಇವರಿಗೆ ಗೌರವ ಟಾಕ್ಟೊರೇಟ್ ಕರ್ನಾಟಕ ವಿವಿಯಿಂದ ದೊರಕಿದಾಗ ಗವಿಮಠದಲ್ಲಿ ಸನ್ಮಾನಿಸಲಾಯಿತು. ಗಡ್ಡದಜ್ಜಾ ಅವರು ಇವರಿಗೆ ಭವಿಷ್ಯ ನುಡಿದು ಇದರಂತಾಗುವಿ ಎಂದು ಆಶೀರ್ವದಿಸಿದ್ದರು. ಕನ್ನಡದ ಆಧುನಿಕ ಮಹಾಕವಿಯೊಬ್ಬನನ್ನು ಕೊಪ್ಪಳ ಗವಿಮಠ ಕೊಡುಗೆಯಾಗಿ ನೀಡಿದೆ.

  1. ಜಗದ್ಗುರು ಮರಿಶಾಂತವೀರ ಶಿವಯೋಗಿಗಳವರು:

1922ರ ಡಿಸೆಂಬರ್ ತಿಂಗಳಿನಲ್ಲಿ ಸೂಡಿಯ ಜುಕ್ತಿ ಹಿರೇಮಠದ ಗುರುನಂಜಯ್ಯ(ಶ್ರೀಕಂಠ)ನವರು 16ನೆಯ ಪೀಠಾಧಿಪತಿಗಳಾಗಿ ಶ್ರೀ ಮನ್ನಿರಂಜನ ಎಂಬ ಹೆಸರಿನಿಂದ ಕಂಪ್ಲಿಯ ಕಲ್ಲುಮಠದ ಪೂಜ್ಯ ಶ್ರೀ ಗಳವರಿಂದ ಅನುಗ್ರಹಿತರಾಗಿ ಪೀಠಾಧಿಪತಿಗಳಾದರು. ಇವರು ನ್ಯಾಯ, ತರ್ಕ, ಹಾಗೂ ಶೈವ ಸಿದ್ದಾಂತಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದಾರೆ. ಯೋಗಶಾಸ್ತ್ರದಲ್ಲಿ ಕಾಶಿಯಲ್ಲಿದ್ದ ಬಂಗಾಳಿ ದಂಪತಿಗಳಿಂದ ತರಬೇತಿ ಪಡೆದಿದ್ದರು. ಆಯುರ್ವೇದದಲ್ಲಿ ವಿದ್ವಾಂಸರಾಗಿದ್ದರು. ಬಾಲ್ಯದಲ್ಲಿ ಸೊಲ್ಲಾಪುರದಲ್ಲಿ ವಾರದ ಮಲ್ಲಪ್ಪನವರ ಪಾಠಶಾಲೆಯಲ್ಲಿ ಓದುತ್ತಿರುವಾಗ ಗುರುಲಿಂಗ ಜಂಗಮ ದಾಸೋಹ ಮಾಡಿಕೊಂಡಿದ್ದ ನಾಲ್ವತ್ತವಾಡದ ಪೂಜ್ಯ ಶ್ರೀ ವೀರೇಶ್ವರ ಶರಣರ ಕ್ರಿಯಾಮೂರ್ತಿಗಳಾಗಿ ಅವರ ವಿಶ್ವಾಸಕ್ಕೆ, ಗೌರವಕ್ಕೆ ಪಾತ್ರರಾಗಿದ್ದರು. ತಾವು ಪೀಠಾಧಿಪತಿಗಳಾಗಿನಿಂದಲೂ ಶ್ರೀ ಮಠದ ದಾಸೋಹದಲ್ಲಿ ಬಡ ವಿದ್ಯಾರ್ಥಿಗಳನ್ನು ಹಳ್ಳಿಗಳಿಂದ ಬರಮಾಡಿಕೊಂಡು ಆಶ್ರಯವನ್ನಿತ್ತು ವಿದ್ಯಾದಾನ ಮಾಡಿದರು. ಇವರು ಆಯುರ್ವೇದದಲ್ಲಿ ಬಲ್ಲವರಾಗಿದ್ದುದರಿಂದ ಗವಿಮಠದಲ್ಲಿ ವಿದ್ಯಾರ್ಥಿಗಳಿಗೆ ಆಯುರ್ವೇದ ಚಿಕಿತ್ಸಾ ವಿಧಾನದ ಪಾಠ ಹೇಳಿ ಆಯುರ್ವೇದ ವೈದ್ಯರ ತಂಡವನ್ನು ನಿರ್ಮಾಣ ಮಾಡಿದ್ದಲ್ಲದೆ, ಆ ಕಾಲದ ಅವಶ್ಯಕತೆಗೆ ಅನುಗುಣವಾಗಿ ಇಂಜೆಕ್ಷನ್ ಥೆರಪಿಯನ್ನು ಸ್ಥಳೀಯ ವೈದ್ಯರಿಂದ ಕೊಡಿಸಿ ಅವರನ್ನು ಯಶಸ್ವಿ ವೈದ್ಯರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇವರು 1951ರಲ್ಲಿ ಶ್ರೀ ಗವಿಸಿದ್ಧೇಶ್ವರ ಮಿಡ್ಲಸ್ಕೂಲಿಗೆ ಶ್ರೀ ಬಿಸಿ ಪಾಟೀಲರನ್ನು ಸಂಸ್ಥಾಪಕ ಮುಖ್ಯಾಧ್ಯಾಪಕರನ್ನಾಗಿಸಿ ಶಾಲೆ ಪ್ರಾರಂಭಿಸಿದರು. ಮುಂದೆ ಅದು ಪ್ರಸಿದ್ದವಾದ ಶ್ರೀ ಗವಿಸಿದ್ಧೇಶ್ವರ ಪ್ರೌಡಶಾಲೆಯಾಯಿತು. 1963ರಲ್ಲಿ ಶ್ರೀ ಗವಿಮಠದ ಆಸ್ತಿ 400ಏಕರೆ ಜಮೀನನ್ನು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟಿಗೆ ನೀಡಿ ಅದನ್ನು ಸ್ಥಾಪಿಸುವ ಮೂಲಕ ಶ್ರೀ ಗವಿಸಿದ್ಧೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಆರಂಭಿಸಿದರು. ಈ ಮಹಾವಿದ್ಯಾಲಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿಯೇ ಶ್ರೇಷ್ಠ ಮಹಾವಿದ್ಯಾಲಯ ಒಂದಾಗಿ ಪ್ರತಿವರ್ಷ ಹಲವಾರು ರ‍್ಯಾಂಕುಗಳನ್ನು ಪಡೆದುಕೊಳ್ಳುತ್ತದೆ. ಹಲವಾರು ಸುಸಂಸ್ಕೃತ ನಾಗರಿಕರನ್ನು ಹಾಗೂ ಕ್ರೀಡಾಪಟುಗಳನ್ನು, ಈ ಮಹಾವಿದ್ಯಾಲಯ ನೀಡಿದೆ.

  1. . ಶಿವಶಾಂತವೀರ ಮಹಾಸ್ವಾಮಿಗಳವರು:

ಇವರು ಸೂಡಿಯ ಜುಕ್ತಿ ಹಿರೇಮಠದ ಜಗದೀಶ್ವರಯ್ಯ ಹಾಗು ಬಸಮ್ಮನವರ ಪುತ್ರರು. ಇವರು ಗವಿಮಠದಲ್ಲಿ ಜ. ಮರಿಶಾಂತವೀರ ಮಹಾಸ್ವಾಮಿಗಳವರಲ್ಲಿದ್ದು ಓದಿ ಮುಂದೆ ಸೂಡಿಯಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಿ ಗಂಗಾವತಿ ತಾಲೂಕಿನ ಹೊಸಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾಗ ಅದಕ್ಕೆ ರಾಜೀನಾಮೆ ಸಲ್ಲಿಸಿ, ಸೂಡಿ ಜುಕ್ತಿ ಹಿರೆಮಠದ ಪಟ್ಟಾಧ್ಯಕ್ಷರಾದರು. 1966 ಅಕ್ಟೋಬರ್ ತಿಂಗಳಿನಲ್ಲಿ ಸೂಡಿಯ ಜುಕ್ತಿ ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದ ಷ.ಬ್ರ ಉಮಾಪತಿ ಶಿವಾಚಾರ್ಯರನ್ನು ಲಿಂ. ಜ. ಮರಿಶಾಂತವೀರ ಮಹಾಸ್ವಾಮಿಗಳವರು ತಮ್ಮ ಉತ್ತರಾಧಿಕಾರಿಯೆಂದು ಆಯ್ಕೆ ಮಾಡಿಕೊಂಡರು. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿಗೆ ಮಠದ ಆಸ್ತಿಯಾಗಿದ್ದ 400 ಎಕರೆ ಜಮೀನ ನೀಡುವಾಗ ಇವರ ಒಪ್ಪಿಗೆ ಕೇಳಿದರು. ಆಗ ಪೂಜ್ಯ ಶಿವಶಾಂತವೀರ ಮಹಾಸ್ವಾಮಿಗಳವರು ತಾವು ಅನುಗ್ರಹಿಸಿದ ಜೋಳಿಗೆ, ನೀಡಿದ ಬೆತ್ತ ಹಾಗೂ ತಮ್ಮ ಸಂಪೂರ್ಣ ಕೃಪೆ ಇದ್ದರೆ ಸಾಕು. ಆಸ್ತಿ, ಅಂತಸ್ತು, ಅಧಿಕಾರ ತಮಗೆ ಬೇಡವೆಂದು ಸಾಷ್ಟಾಂಗ ಹಾಕಿದ್ದನ್ನು ಭಕ್ತರು ಬಲ್ಲರು. ಇವರು ಶ್ರೀ ಗವಿಮಠದ 63 ಶಾಖಾಮಠಗಳನ್ನು ಸಂದರ್ಶಿಸಿ ಅವುಗಳ ಜೀರ್ಣೋದ್ಧಾರ ಮಾಡಿ ಅಲ್ಲಲ್ಲಿ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ ವಿದ್ಯಾದಾನಕ್ಕೆ ಪ್ರೋತ್ಸಾಹ ನೀಡಿದರು. ಕಡ್ಲಬಾಳು, ಹೂವ್ವಿನ ಹಡಗಲಿ, ಬಿಸರಳ್ಳಿ, ಕಾಮಾಲಾಪುರ, ಬುಕ್ಕಸಾಗರ ಹಾಗೂ ಹಿರೇಬಗನಾಳ ಮಠಗಳಿಗೆ ಮರಿದೇವರನ್ನು ನೇಮಿಸಿದರು. ಅಲ್ಲಲ್ಲಿ ರಥೋತ್ಸವಗಳಾಗುವಂತೆ ಏರ್ಪಾಡು ಮಾಡಿದರು.

ಇವರ ಕಾಲದಲ್ಲಿ ಕೊಪ್ಪಳ ಗವಿಮಠವು ಅನೇಕ ಅಬಿವೃದ್ದಿಗಳನ್ನು ಪಡೆಯಿತು. ಮಹಾದ್ವಾರ ನಿರ್ಮಾಣ, ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪ, ಪಕ್ಕದಲ್ಲಿ ಅಥಿತಿಗಳಾಗಾಗಿ ಸುಸಜ್ಜಿತ ವಸತಿ ಗೃಹಗಳ ನಿರ್ಮಾಣ ಮಾಡಿದ್ದಾರೆ. ಹೊಸದಾಗಿ ಟ್ರಸ್ಟ್ ಆಫೀಸ್ ಕಟ್ಟಿಸಿದರು. ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜು ಆರಂಭಿಸಿದರು. ಅವರು ಭಕ್ತರಿಗಾಗಿ, ಭಕ್ತರ ಏಳಿಗಾಗಿ ತಮ್ಮ ದೇಹವನ್ನು ಶ್ರೀ ಗಂಧದ ಕೊರಡಿನಂತೆ ತೇಯ್ದುಕೊಂಡರು. ಅವರು ಭಕ್ತರ ಬಯಸಿದ್ದೆಲ್ಲೆಲ್ಲ ಹಗಳಿರುಳೆನ್ನದೆ, ಹೋಗಿ ಅವರನ್ನು ಆಶೀರ್ವದಿಸಿ ಬಂದರು. ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಿದ್ದರು. ಮಕ್ಕಳಿಲ್ಲದವರಿಗೆ ಮಕ್ಕಳ ನೀಡುವ ನಡೆದಾಡುವ ಗವಿಸಿದ್ಧೇಶ್ವರರೆಂದೇ ಪ್ರಖ್ಯಾತರಾಗಿದ್ದಾರೆ. ಪೂಜ್ಯ ಜ. ಶಿವಶಾಂತವೀರ ಮಹಾಸ್ವಾಮಿಗಳವರು ತಮ್ಮ ಅನಾರೋಗ್ಯದ ನಿಮಿತ್ಯ ದಿ 13-12-2002 ರಂದು ವಿಜೃಂಭಣೆಯಿಂದ ಈಗಿನ 18ನೆಯ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರಿಗೆ ಪಟ್ಟಾಭಿಷೇಕ ಮಹೋತ್ಸವವನ್ನು ಏರ್ಪಡಿಸಿ ಅಧಿಕಾರಿ ನೀಡಿ ಅನುಗ್ರಹಿಸಿದರು. ಅವರು ದಿ. 26-3-2003ರಲ್ಲಿ ಲಿಂಗೈಕ್ಯರಾದರು. ಗವಿಸಿದ್ಧೇಶ್ವರರ ಜಾತ್ರೆಗೆ ಸೆರಿದಂತೆ ಭಕ್ತರು ಸೇರಿ ಅವರಿಗೆ ತಮ್ಮ ಗೌರವ ಹಾಗೂ ಭಕ್ತಿಯನ್ನು ಅರ್ಪಿಸಿದರು. ಲಿಂಗೈಕ್ಯ ಶ್ರೀಗಳವರು ಈಗಿಲ್ಲವಾದರೂ ಅವರು ನಡೆದಾಡಿದ ನಿಂತ ಸ್ಥಳದಲ್ಲಿ ಸುಳಿದು ಸೂಸುವ ಗಾಳಿಯಲ್ಲಿ ನೆಲಿಸಿದ್ದಾರೆ.

  1. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು

ಶ್ರೀ ಗವಿಮಠದ ಭವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬರಲು ಜ. ಶಿವಶಾಂತವೀರ ಮಹಾಸ್ವಾಮಿಗಳವರು ಉತ್ತರಾಧಿಕಾರಿಗಳ ಹುಡುಕಾಟದಲ್ಲಿದ್ದರು. ಗವಿಸಿದ್ದ ಶಿವಯೋಗಿ ಇದ್ದಲ್ಲಿಗೆ ಆ ಉತ್ತರಾಧಿಕಾರಿ ಗವಿಮಠಕ್ಕೆ ಬರುವಂತೆ ಮಾಡಿಕೊಂಡಿದ್ದನು. ಅಂತೆಯೇ ಗವಿಸಿದ್ಧಶ್ವರರ ಹೆಸರನ್ನು ಅವರ ಗುರುಗಳು ಇವರಿಗಿರಿಸಿದ್ದಾರೆ.

ಬಾಲಕ ಪರ್ವತಯ್ಯ ತನ್ನ ಹುಟ್ಟೂರು ಕಲಬುರ್ಗಿಯ ಹತ್ತಿರದ ಹಾಗರಗುಂಡಿಗಿಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವಾಗ ಅವರ ಗ್ರಾಮಕ್ಕೆ ಸ್ವಾಮಿಗಳೊಬ್ಬರು ಆಕಸ್ಮಕವಾಗಿ ಅಪರಿಚಿತ ಸ್ಥಳಕ್ಕೆ ಆಗಮಿಸಿದ್ದರು. ಅವರಿಗೆ ಪೂಜೆ ಪ್ರಸಾದದ ಸಮಯವಾಗಿತ್ತು. ಹೊಸ ಊರು. ಅವರು ಯಾರಲ್ಲಿಗೆ ಹೋಗಬಬೇಕೆಂದು ಯೋಚಿಸುತ್ತಿರುವಾಗಲೇ ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಅವರನ್ನು ಕಂಡು ನಮಸ್ಕರಿಸಿ, ತಮ್ಮ ಹಿರೇಮಠಕ್ಕೆ ಕರೆದುಕೊಂಡು ಬಂದನು. ತಾಯಿತಂದೆ ತುಂಬ ಸಾತ್ವಿಕರು. ಗುರುಲಿಂಗ ಜಂಗಮ ಭಕ್ತರು. ಮಗ ಕರೆದುಕೊಂಡು ಬಂದ ಸ್ವಾಮಿಗಳವರ ಪೂಜೆಯ ವ್ಯವಸ್ತೆ ಮಾಡಿ, ಶಿವ ನೀಡಿದ್ದನ್ನು ಅವರಿಗೆ ಅರ್ಪಣೆ ಮಾಡಿದರು. ಅರ್ಚನ, ಅರ್ಪಣವಾದ ಮೇಲೆ ಅನುಭಾವ ನಡೆಯಿತು. ಈ ಕಿರುವಯಸ್ಸಿನಲ್ಲಿ ಇಂಥ ಹಿರಿಯ ಗುಣಗಳನ್ನು ಪರ್ವತಯ್ಯನಲ್ಲಿ ಕಂಡು ಅವರು ಕರಗಿ ಹೋದರು. ಜಂಗಮ ದಾಸೋಹ ಮಾಡಿದ ಬಾಲಕನಿಗೆ ಅನುಗ್ರಹದ ಮಳೆಗೆರೆದವರು ಮುದ್ದೇಬಿಹಾಳ ತಾಲೂಕಿನ ತಮದೊಡ್ಡಿ ಶ್ರೀ ಮ.ನಿ.ಪ್ರ. ಶಿವಶಂಕರ ಮಹಾಸ್ವಾಮಿಗಳವರು.

ಬಾಲಕ ಪರ್ವತಯ್ಯ ಏಳನೆ ತರಗತಿ ಪಾಸಾದ ಮೇಲೆ ವಿದ್ಯಾಭ್ಯಾಸಕ್ಕಾಗಿ ತಮದೊಡ್ಡಿ ಶ್ರೀಗಳವರು, ಶಿವಯೋಗ ಮಂದಿರದಲ್ಲಿ ತಮ್ಮ ಸಹಾಧ್ಯಾಯಿಗಳಾಗಿದ್ದ ಮುಂಡರಗಿ ಸಂಸ್ಥಾನ ಮಠದ ಜ. ಅನ್ನದಾನೀಶ್ವರ ಮಹಾಸ್ವಾಮಿಗಳವರಲ್ಲಿ ಏರ್ಪಾಡು ಮಾಡುವುದಾಗಿ, ಓದಿ ಜಾಣನಾಗಿ ಬಡತನದಲ್ಲಿರುವ ತಮ್ಮ ತಾಯಿ ತಂದೆ ಇಬ್ಬರು ತಮ್ಮಂದಿರು ಸಂರಕ್ಷಿಸಿಕೊಂಡು, ತಮ್ಮ ಹಿರೇಮಠವನ್ನು ಮುನ್ನಡೆಸಿಕೊಂಡು ಹೋಗುವಂತಾಗಬೇಕೆಂದು ಹಾರೈಸಿದ್ದರು. ಅದರಂತೆ ದೂರದ ಹಾಗರಗುಂಡಿಗಿಯಿಂದ ಮುಂಡರಗಿಗೆ ಹೋಗುವ ಮಾರ್ಗಮದ್ಯದಲ್ಲಿ ಕೊಪ್ಪಳ ಗವಿಮಠದಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಿದರು. ಆಗ ಶ್ರೀಗಳವರು ನಮ್ಮವೂ ಶಾಲಾ ಕಾಲೇಜುಗಳಿವೆ ನೋಡಿಕೊಂಡು ಬನ್ನಿರಿ. ಆ ಮೇಲೆ ಮುಂಡರಗಿಗೆ ದಯಮಾಡಿಸಿರಿ ಎಂದು, ನಸುಕಿನಲ್ಲಿಯೇ ಮುಂಡರಗಿಗೆ ಹೊರಡಲಿದ್ದ ಅವರಿಗೆ ತಿಳಿಸಿದರು.

ಮುಂಡರಗಿಗೆ ಹೋಗುವ ಮೊದಲು ತಮದೊಡ್ಡಿ ಶ್ರೀಗಳವರು ಬಾಲಕ ಪರ್ವತಯ್ಯನಿಗೆ ಮಠದ ಎದುರಿಗಿರುವ ಹೈಸ್ಕೂಲು ತೋರಿಸಿ ನೋಡಿಕೊಂಡು ಬರಲು ತಿಳಿಸಿದರು. ಅದರಂತೆ ಬಾಲಕ ಶಾಲೆ ಕಾಲೇಜುಗಳನ್ನೆರಡು ಸುತ್ತಾಡಿಕೊಂಡು ಬಂದನು. ಅಷ್ಟರಲ್ಲಿ ಪೂಜೆ ಪ್ರಸಾದದ ವ್ಯವಸ್ತೆಯಾಗಿತ್ತು. ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳವರು ಬಾಲಕ ಪರ್ವತಯ್ಯನನ್ನು ಮುಂಡರಿಗಿಗೆ ಹೋಗುವ ಬಗ್ಗೆ ವಿಚಾರಿಸಿದರು. ಬಾಲಕ ನಾನು ಇಲ್ಲಿಯೇ ಇದ್ದು ಅಭ್ಯಾಸ ಮಾಡುತ್ತೇನೆಂದು ತನ್ನ ಮನದ ಇಚ್ಚೆಯನ್ನು ವ್ಯಕ್ತಪಡಿಸಿದನು. ಪೂಜ್ಯ ಜ. ಶಿವಶಾಂತವೀರ ಮಹಾಸ್ವಾಮಿಗಳವರಿಗೆ ತುಂಬ ಆನಂದವಾಯಿತು. ಬಾಲಕ ಪರ್ವತಯ್ಯನ ಮುದ್ದಾದ ಮುಖ, ತೇಜಃಪುಂಜ ಕಣ್ಣು, ವಿನಯಪೂರ್ಣವಾಗಿದ್ದ ಮಾತು ಆಕರ್ಷಿಸಿದವು. ಬಾಲಕನು ‘ದಾಸೋಹದಲ್ಲಿರದೆ ನಮ್ಮೊಂದಿಗೆ ಗವಿಯಲ್ಲಿರಲಿ’ ಎಂದು ಅಪ್ಪಣೆ ಕೊಡಿಸಿದರು. ಶ್ರೀಗಳವರು ಎಂದೂ ಪರ್ವತಯ್ಯ ಎಂದು ಹೆಸರುಗೊಂಡು ಕರೆಯಲೇ ಇಲ್ಲ ‘ದೇವರು’ ಎಂದೇ ಕರೆಯುತ್ತಿದ್ದರು. ಬಾಲಕನಾದರೂ ಎಂದೂ ಅಜ್ಜಾ ಅವರೇ, ಬುದ್ದಿ ಎಂದು ಸಂಭೋಧಿಸದೇ ‘ಅಪ್ಪಾ’ ಎಂದೇ ಹೇಳುತ್ತಿದ್ದನು.

ಮುಂಡರಗಿ ಶ್ರೀ ಮಠಕ್ಕೆ ಓದಲು ಹೊರಟಿದ್ದ ಪರ್ವತಯ್ಯ ಕೊಪ್ಪಳ ಗವಿಮಠದಲ್ಲಿ ಉಳಿದು ಪರ್ವತದೇವರಾದರು. ಶತಮಾನದ ಹಿಂದೆ ಇಂಥದೇ ಘಟನೆ ಇದೇ ಗವಿಮಠದಲ್ಲಿ ಜರುಗಿತ್ತು. ಷಡ್ಡರ್ಶನ ತೀರ್ಥ, ಕಳಾಪ್ರಪೂರ್ಣ, ಮಹಾಕವಿಯೆಂದು ಪ್ರಸಿದ್ದರಾಗಿದ್ದ ಪಂ. ವೈ. ನಾಗೇಶಾಸ್ತ್ರಿಗಳವರು ಹುಡಗನಾಗಿದ್ದಾಗ ಗೊಂಡಬಾಳಿನ ಪಂ. ಬಸಪ್ಪಶಾಸ್ತ್ರಿಗಳವರಲ್ಲಿ ಜ್ಯೋತಿಷ್ಯ ಕಲಿಯಲು ಹೋಗಬೇಕೆಂದಿದ್ದರು. ದಾರಿಯಲ್ಲಿ ಗವಿಮಠಕ್ಕೆ ಬಂದು ಆಗಿದ್ದ ಗಡ್ಡದಜ್ಜಾ ಅವರೆಂದೇ ಪ್ರಸಿದ್ದರಾಗಿದ್ದ ಲಿಂ. ಜ. ಶಿವಶಾಂತವೀರ ಮಹಾಸ್ವಮಿಗಳವರನ್ನು ಕಂಡಿದ್ದರು. ಅವರು ಸಂಸ್ಕೃತ ಕಲಿತರೆ ಜ್ಯೋತಿಷ್ಯವೂ ಬರುತ್ತದೆ. ನಮ್ಮ ಮಠದಲ್ಲಿ ಸಂಸ್ಕೃತ ಪಾಠಶಾಲೆಯಿದ್ದು ವಿದ್ವಾಂಸರಾಗಿರುವ ಕೊಂಗವಾಡ ವೀರಭದ್ರ ಶಾಸ್ತ್ರಿಗಳವರು ಅಧ್ಯಾಪಕರಾಗಿದ್ದರೆ. ಮಠದಲ್ಲಿದ್ದು ಓದಿ ಪಂಡಿತರಾಗಿರೆಂದು ಬುದ್ದಿ ಹೇಳಿ ಓದಿಸಿದ್ದರು. ಮುಂದೆ ಅವರು ಹುಬ್ಬಳ್ಳಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದರು. ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು ಹಾಗೂ ಸೊಂಡೂರು ಮಹಾರಾಜರಿಬ್ಬರೂ ಅವರ ಆಸ್ಥಾನವಿದ್ವಾಂಸರೆಂದು ಗೌರವಿಸಿದರು. ಧಾರವಾಡದ ಮುರಘಾಮಠದಲ್ಲಿ ಪೂಜ್ಯ ಲಿಂ.ಮೃತ್ಯುಂಜಯಪ್ಪಗಳವರು ಆರಂಭಿಸಿ ಅಖಿಲ ಭಾರತ ಶಿವಾನುಭವ ಸಂಸ್ಥೆ ನಡೆಸುವ ಪರೀಕ್ಷೆಗಳಿಗೆ ಪಠ್ಯ ಪುಸ್ತಗಳನ್ನು ರಚಿಸಿದರು ಹತ್ತಾರು ನಾಟಕ, ಚರಿತ್ರೆಗಳನ್ನು ಬರೆದರು. ಹಲವಾರು ಪುರಾಣಗಳನ್ನು ಬರೆದರು. ಕಾಳಿದಾಸನ ಕೃತಿಗಳನ್ನು, ಭಗದ್ಗೀತೆಯನ್ನು ವಾರ್ಧಕ ಷಟ್ಪದಿಯಲ್ಲಿ ಅನುವಾದಿಸಿದರು. ತಮ್ಮ ಕೊನೆಗಾಲದಲ್ಲಿ ಕೊಪ್ಪಳ ಶ್ರಿ ಗವಿಸಿದ್ಧೇಶ್ವರ ಪುರಾಣ ಬರೆದರು. ಗುರು ಋಣವನ್ನು ತೀರಿಸಿದರು. ಕವಿ ಡಾ. ಸಿದ್ದಯ್ಯ ಪುರಾಣಿಕರು ಕಲಬುರ್ಗಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.

ಅದೇ ರೀತಿಯಲ್ಲಿ ಹಾಗರಗುಂಡಿಗಿ ಹಿರೇಮಠದ ಪರ್ವತಯ್ಯನವರು ಓದುವ ನೆಪದಲ್ಲಿ ಕೊಪ್ಪಳದ ಗವಿಮಠಕ್ಕೆ ಆಗಮಿಸಿದರು. ಇಲ್ಲಿಯ ಶ್ರೀ ಗವಿಸಿದ್ಧೇಶ್ವರ ಹೈಸ್ಕೂಲಿನಲ್ಲಿ ಎಂಟನೆಯ ತರಗತಿಗೆ 1990-91ರಲ್ಲಿ ಹೆಸರು ಹಚ್ಚಿಸಿ, 1992-93ರಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆಯಾದರು. 1997-98ರಲ್ಲಿ ಗುಲಬುರ್ಗಾ ವಿಶ್ವವಿದ್ಯಾಲಯಕ್ಕೆ ಐದನೆಯ ರ‍್ಯಾಂಕ್ ಪಡೆದು ಬಿ.ಎ. ಪದವಿಧರರಾದರು, ಶ್ರೀ ಗವಿಸಿದ್ಧೇಶ್ವರ ಕಾಲೇಜಿನಿಂದ. ಜ. ಶಿವಶಾಂತವೀರ ಮಹಾಸ್ವಾಮಿಗಳವರು ಇವರನ್ನು ತಮ್ಮೊಡನೆ ಇರಿಸಿಕೊಂಡು ಸಂಸ್ಕೃತ ಪಾಠ ಹೇಳಿದರು. ಲಿಂಗಪೂಜೆ, ಅನುಷ್ಠಾನಗಳನ್ನು ಪರಿಚಯಿಸಿದರು. ತಾವು ಬಂದಂದಿನಿಂದ ಪರ್ವತ ದೇವರು ತಮ್ಮ ಗುರುಗಳ ಸೇವೆಯನ್ನು ಮನಮುಟ್ಟಿ ಮಾಡುತ್ತ, ಮನಮುಟ್ಟಿ ಅಭ್ಯಾಸ ಮಾಡುತ್ತ ಬಂದರು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಸಂಪಾದಿಸಿದರು. ಮುಂದೆ ಪುಣೆಯಲ್ಲಿದ್ದು ತತ್ವಶಾಸ್ತ್ರದಲ್ಲಿ ಪಡೆದಿದ್ದಲ್ಲದೆ. ಇಂಗ್ಲೀಷ್ ಸಾಹಿತ್ಯದಲ್ಲಿಯೂ ಎಂ.ಎ. ಪದವಿ ಪಡೆದುಕೊಂಡರು. ಇಷ್ಟರಲ್ಲಾಗಲೇ ಇವರನ್ನು ಶ್ರೀ ಗವಿಮಠದ ಉತ್ತರಾಧಿಕಾರಿಗಳನ್ನಾಗಿ ಗಣ್ಯಮಾನ್ಯರ ಸಮಕ್ಷಮದಲ್ಲಿ ಆಯ್ಕೆಮಾಡಿಕೊಂಡಿದ್ದರು, ಅವರ ಗುರುಗಳು. ಪೂಜ್ಯ ಜ. ಶಿವಶಾಂತವೀರ ಮಹಾಸ್ವಾಮಿಗಳವರ ಅನಾರೋಗ್ಯ ನಿಮಿತ್ಯ ದಿ.13-12-2002ರಲ್ಲಿ ವಿಜೃಂಭಣೆಯಿಂದ ಪಟ್ಟಾಧಿಕಾರ ನೀಡಿದರು. ಅವರು ದಿ. 26-3-2003ರಲ್ಲಿ ಲಿಂಗೈಕ್ಯರಾದರು. ಗವಿಸಿದ್ಧೇಶ್ವರ ಜಾತ್ರೆಗೆ ಸೇರಿದಂತೆ ಭಕ್ತರು ಸೇರಿ ಅವರಿಗೆ ಭಕ್ತರು ತಮ್ಮ ಗೌರವ ಹಾಗೂ ಶ್ರದ್ದಾಂಜಲಿಗಳನ್ನು ಅರ್ಪಿಸಿದರು. ಲಿಂಗೈಕ್ಯ ಶ್ರೀಗಳವರು ಈಗಿಲ್ಲವಾದರೂ ಅವರು ನಡೆದಾಡಿದ ನಿಂತ ಸ್ಥಳದಲ್ಲಿ, ಸುಳಿದು ಸೂಸುವ ಗಾಳಿಯಲ್ಲಿ ನೆಲೆಸಿದ್ದಾರೆ.